ರಂಗಿತರಂಗ ಸಿನೆಮಾ (Rangi Taranga Kannada movie review)
-->

ಇತ್ತೀಚಿಗೆ ಎಲ್ಲರ ಪ್ರಶಂಸೆ ಗಳಿಸಿ ನಾಡಿನಾದ್ಯಂತ ಹೆಸರು ಮಾಡಿರುವ ರಂಗಿತರಂಗ ಸಿನೆಮಾವನ್ನು ನಾನು ಕುಟುಂಬದವರೊಡನೆ ಮೊನ್ನೆ ಭಾನುವಾರ ಕೋರಮಂಗಲದ ಪಿ ವಿ ಆರ್ ಚಿತ್ರಮಂದಿರದಲ್ಲಿ ನೋಡಿದೆ. ಚಿತ್ರದ ಕೊನೆಯಲ್ಲಿ ನನಗೆ ಆಗಿದ್ದು mixed feelings. ಅತ್ತ ಪೂರ್ತಿ ಹೊಗಳಲೂ ಆಗದ, ಇತ್ತ ತೆಗಳಲೂ ಆಗದ ಸಂದಿಗ್ಧ ಪರಿಸ್ತಿತಿ. ಬಹುಷ ನನ್ನ ನಿರೀಕ್ಷೆಯೇ ವಿಪರಿತವಿತ್ತೇನೋ ಗೊತ್ತಿಲ್ಲ, ಚಿತ್ರದ ಬಗ್ಗೆ ನಾನು ಗಮನಿಸಿದ್ದನ್ನು, ನನಗೆ ಅನಿಸಿದ್ದನ್ನು ಇಲ್ಲಿ ಬರೆದಿದ್ದೇನೆ. ಹೊಗಳುವುದು, ತೆಗಳುವುದು ಅಥವಾ ಉಪೇಕ್ಷಿಸುವುದು ನಿಮಗೆ ಬಿಟ್ಟಿದ್ದು.

ಇತ್ತೀಚಿಗೆ ತೆರೆ ಕಾಣುತ್ತಿರುವ ಮಚ್ಚು ಲಾಂಗು ಭರಿತ ಹೊಡಿ ಮಗ ಬಡಿ ಮಗ ಮಾದರಿಯ ಸಿನೆಮಾಗಳಿಗೆ ಹೋಲಿಸಿದರೆ ರಂಗಿ ತರಂಗ ಸಾವಿರ ಪಾಲು ಮೇಲು. ಹೊಸ ಮಾದರಿಯ ಕತೆ, ಹೊಸ ಮುಖಗಳು, ಉತ್ತಮ ಚಿತ್ರೀಕರಣ ಇವೆಲ್ಲವೂ ಮನಸೆಳೆಯುತ್ತವೆ. ಆದರೆ ಮೂಲತ ಉಡುಪಿ ಜಿಲ್ಲೆಯವನಾದ ನನಗೆ ಕತೆಯನ್ನು ಇನ್ನಷ್ಟು ಉತ್ತಮಪಡಿಸಬಹುದಿತ್ತು, ಭೂತಾರಾಧನೆ ಬಗ್ಗೆ, ಸ್ಥಳೀಯ ಸಂಸ್ಕೃತಿ ಬಗ್ಗೆ ಹೆಚ್ಚಿನ ಮಾಹಿತಿ ಕೊಡಬಹುದಿತ್ತು ಎಂದು ಅನಿಸಿತು.

ಕತೆಯಲ್ಲಿ ಕಂಡುಬಂದ ನ್ಯೂನತೆಗಳು:
೧. ಆ ಕೆಲಸದ ಹೆಂಗಸು ಕದ್ದ ವಾಚು ಪೈಲ್ವಾನನ (ಗರ್ನಲ್ ಬಾಬು) ಬಳಿ ಹೇಗೆ ಬಂತು ಎಂದು ತಿಳಿಯಲಿಲ್ಲ.
೨. ಸಂಧ್ಯಾಳ ಕಾರಿನಲ್ಲಿ continuity ಮಿಸ್ಸಿಂಗ್ ... ಒಮ್ಮೆ ಇನ್ನೋವ, ಮತ್ತೊಮ್ಮು ಪೋಲೋ ಕೊನೆಗೆ ಸ್ವಿಫ್ಟ್ ...
೩. ಸಾಮಾನ್ಯವಾಗಿ ಆಡಿ ಕಾರುಗಳು ಅತ್ಯುತ್ತಮ ಸುರಕ್ಷಾ ತಂತ್ರಜ್ಞಾನ ಹೊಂದಿರುತ್ತವೆ. ಮಾಮೂಲಿ ಬೈಕಿಗೆ ಅತಿ ಕಡಿಮೆ ವೇಗದಲ್ಲಿ ಡಿಕ್ಕಿ ಹೊಡೆದ ಮಾತ್ರಕ್ಕೆ ಕಾರು ಸಂಪೂರ್ಣ ಭಸ್ಮವಾಗುವುದಿಲ್ಲ. (ಆಡಿ ಗೆ ಬೆಂಕಿ ಹೊತ್ತಿಕೊಂಡ ಕೆಲವು ಉದಾಹರಣೆಗಳಿವೆ - ಉದಾ ೧ * ಉದಾ ೨ ಆದರೂ ಒಳಗಿದ್ದವರು ಹೊರಗೆ ಬರಲಾರದಷ್ಟು ವೇಗವಾಗಿ ಬೆಂಕಿ ವ್ಯಾಪಿಸುವುದಿಲ್ಲ. ನಿರ್ಮಾಪಕರು ಡಾಟ್ಸನ್ ಗೋ ಬಳಸಿದ್ದರೆ ನಾನು ನಂಬುತ್ತಿದ್ದೆ  (ಡಾಟ್ಸನ್ ಗೋ ಬಹಳ ದುರ್ಭಲವಾಗಿದೆ).  ಹೆಲ್ಮೆಟ್ ಅಥವಾ ಇನ್ಯಾವುದೇ ಸುರಕ್ಷಾ ದಿರಿಸು ಹಾಕದ ಬೈಕ್ ಚಾಲಕ ಆಡಿಗೆ ಗುದ್ದಿದರೂ  ಏನೂ  ಆಗದೆ ಬದುಕುಳಿಯುತ್ತಾನೆ.
೪. ಲಾಬ್ ರಿಪೋರ್ಟ್ ಒಂದೇ ನೇರವಾಗಿ ಆಸ್ಪತ್ರೆಗೆ ಹೋಗುತ್ತವೆ ಅಥವಾ ರೋಗಿಗಳೇ ತೆಗೆದುಕೊಂಡು ಹೋಗುತ್ತಾರೆ. ಅಂಚೆ ಮೂಲಕ ಹೋಗುವುದಿಲ್ಲ.
೫. ಕಾರು ಅಪಘಾತದಲ್ಲಿ ಸತ್ತ ಇಬ್ಬರ ಕುಟುಂಬದವರು ಸುಮ್ಮನಿರುತ್ತಾರೆಯೇ? ತಮ್ಮ ಮಗಳ ಹೆಸರು ಬೆರೆಯವಳೊಬ್ಬಳು ಬಳಸುತ್ತಿರುವುದು ಅವರಿಗೆ ಗೊತ್ತಾಗುವುದಿಲ್ಲವೇ?
೬. ಹಳ್ಳಿ ಪ್ರದೇಶದಲ್ಲಿ ಗುಡ್ಡದ ಮೇಲಿಂದ ಕೂಗಿದರೆ, ಕಿರುಚಿಕೊಂಡರೆ ಎಷ್ಟು ದೂರ ಕೇಳುತ್ತದೆ? ನೂರಿನ್ನೂರು ಮೀಟರ್ ? ಚಿತ್ರದಲ್ಲಿ ಕಿಲೋಮೀಟರ್ ಗಟ್ಟಳೆ ಕೇಳಿಸುತ್ತದೆ ಎಂಬಂತೆ ತೋರಿಸಲಾಗಿದೆ.

ಸಿನೆಮಾದಲ್ಲಿ ೨-೩ ಗಂಟೆ ಸಮಯದಲ್ಲಿ ಕತೆಯೊಂದನ್ನು ಶೂನ್ಯದಿಂದ ಪ್ರಾರಂಭಿಸಿ ಒಂದು ತಾರ್ಕಿಕ ಅಂತ್ಯ ಕಾಣಿಸಬೇಕಾದ ಅನಿವಾರ್ಯತೆ ಇರುವುದರಿಂದ ಕೆಲವು ಲಾಜಿಕ್ ಗೆ ಸಿಗದ ವಿಷಯಗಳನ್ನು ಅಳವಡಿಸಿಕೊಳ್ಳಬೇಕಾದ ಅನಿವಾರ್ಯತೆ ಇರುತ್ತದೆ ಎನ್ನುವುದನ್ನು ನಾನು ಒಪ್ಪುತ್ತೇನೆ. ಆದರೂ  ಒಂದು ಮಿತಿಯಲ್ಲಿದ್ದರೆ ಚೆನ್ನ.

ಸಿನೆಮಾದಲ್ಲಿ ಭೂತಾರಾಧನೆಯನ್ನು, ತತ್ಸಂಬಂಧಿ ವಿಷಯವನ್ನು ಒಂದು ಭಯ ಹುಟ್ಟಿಸುವ ವಸ್ತುವಾಗಿ ಬಳಸಲಾಗಿದೆಯೇ ಹೊರತು ಅವುಗಳ ಇತಿಹಾಸ ತಿಳಿಸುವ ಪ್ರಯತ್ನ ವಾಗಲಿ, ವೈಜ್ಯ್ನಾನಿಕ ವಿಶ್ಲೇಷಣೆ ಆಗಲೀ ನೆಡೆದಿಲ್ಲ. ಗುಡ್ಡದ ಭೂತ ಧಾರಾವಾಹಿಯಲ್ಲಿ ಹೆದರಿಕೆ ಹುಟ್ಟಿಸಲು ಬಳಸುವ ತಂತ್ರವನ್ನು ಬಯಲಿಗೆಳೆಯುವ ಪ್ರಯತ್ನ ನೆಡೆದಿತ್ತು.

ಅಬ್ಬರದ ಸಂಗೀತವನ್ನು ಸ್ವಲ್ಪ ಕಡಿಮೆ ಮಾಡಿ ಮೈತ್ರಿ ಸಿನೆಮಾದಂತೆ ಇನ್ನೂ ಸ್ವಲ್ಪ ನಾಜೂಕಾಗಿ ತೋರಿಸಿಕೊಟ್ಟಿದ್ದಾರೆ ಚೆನ್ನಾಗಿರೊದು.

ಹತ್ತು ಹಲವು ಉಪ ಕಥೆಗಳು, ಒಳ ಕಥೆಗಳು ಕೆಲವೊಮ್ಮೆ ಅನಗತ್ಯ ತಲೆಬಿಸಿ ನೀಡಬಹುದು.

ಇಷ್ಟೆಲ್ಲಾ ಇದ್ದರೂ ಸಿನೆಮಾ ಮಾಮೂಲಿ ಮಸಾಲೆ ಸಿನೆಮಾಗಳಿಗಿಂತ ಬಹಳ ಭಿನ್ನವಾಗಿರುವುದರಿಂದ ಎಲ್ಲರಿಗೂ ಇಷ್ಟವಾಗಿದೆ. ವಿಶ್ವದಾದ್ಯಂತ ಜಯಭೇರಿ ಭಾರಿಸುತ್ತಿದೆ, ಇತರ ಭಾಷೆಗಳಿಗೂ ರೂಪಾಂತರಗೊಳ್ಳಲಿದೆ. ಹೊಸ ಪ್ರಯೋಗ ನಡೆಸಿ ಯಶಸ್ಸು ಕಂಡ ಚಿತ್ರ ತಂಡಕ್ಕೆ ಶುಭಾಷಯಗಳು 

Comments 0